ಫಿಟ್ಸ್ ಜೆರಲ್ಡ್, ಜಾರ್ಜ್ ಫ್ರಾನ್ಸಿಸ್
	1851-1901.  ಐರಿಶ್ ಭೌತ ವಿಜ್ಞಾನಿ.  ಜನನ 3.8.1851, ಮರಣ 22.2.1901. 1877ರಲ್ಲಿ ಡಬ್ಲಿನ್ನಿನ ಟ್ರಿನಿಟಿ ಕಾಲೇಜಿನಲ್ಲಿ ಟ್ಯೂಟರ್ ಆಗಿ ಕೆಲಸಕ್ಕೆ ಸೇರಿ 1881ರಲ್ಲಿ ಪ್ರಾಧ್ಯಾಪಕನಾದ.  ರೇಡಿಯೊ ತರಂಗಗಳನ್ನು ಪ್ರಸಾರ ಮಾಡುವ ವಿಧಾನಕ್ಕೆ ಸೂಚನೆಯನ್ನು ಮೊತ್ತ ಮೊದಲು ಕೊಟ್ಟ ವಿಜ್ಞಾನಿ ಇವನೇ.  ವಿಕಿರಣಕ್ಕೆ ಸಂಬಂಧಿಸಿದಂತೆ ನಡೆಸಿದ ಪ್ರಯೋಗಗಳನ್ನು ಆಧರಿಸಿ ಆಂದೋಳಕ ವಿದ್ಯುತ್ಟ್ರವಾಹದಿಂದ (ಆಸಿಲೇಟಿಂಗ್ ಎಲೆಕ್ಟ್ರಿಕ್ ಕರೆಂಟ್) ವಿದ್ಯುತ್ಕಾಂತ ಅಲೆಗಳ ಪ್ರಸಾರ ಸಾಧ್ಯವೆಂಬ ಅಭಿಪ್ರಾಯಕ್ಕೆ ಬಂದ.  ಈ ಸಂಶೋಧನೆಯನ್ನು ಜರ್ಮನಿಯ ಹಟ್ರ್ಸ್ ಎಂಬಾತ ಮುಂದುವರಿಸಿ ದೂರಲೇಖನದ (ಟೆಲಿಗ್ರಾಫಿ) ಬೆಳೆವಣಿಗೆಗೆ ಕಾರಣನಾದ.

	ಅಮೆರಿಕದ ಕ್ಲೀವ್‍ಲೆಂಡಿನಲ್ಲಿ ಮೈಕಲ್ಸನ್ ಮತ್ತು ಮಾರ್ಲೀ ಎಂಬ ಇಬ್ಬರು ಭೌತವಿಜ್ಞಾನಿಗಳು ಸುಪ್ರಸಿದ್ಧವಾದ ಒಂದು ಪ್ರಯೋಗವನ್ನು ಮಾಡಿದರು (1887).  ಬೆಳಕಿನ ಮಾಧ್ಯಮವೆಂದು ಆಗ ನಂಬಲಾಗಿದ್ದ ಈಥರಿನ ನಿಶ್ಚಲ ಕಡಲಿನಲ್ಲಿ ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವುದು ಸರಿಯಷ್ಟೆ.  ಹಾಗಾದರೆ ಭೂಮಿಯ ಚಲನ ದಿಶೆಯಲ್ಲಿ ಪ್ರೇಷಿಸಲಾದ ಬೆಳಕು ಅಧಿಕ ವೇಗದಿಂದಲೂ ಎದುರು ದಿಶೆಯಲ್ಲಿ ಪ್ರೇಷಿಸಲಾದ ಬೆಳಕು ಕಡಿಮೆ ವೇಗದಿಂದಲೂ ಸಾಗಬೇಕೆಂದು ಈ ವಿಜ್ಞಾನಿಗಳು ತರ್ಕಿಸಿ ಈ ವೇಗವ್ಯತ್ಯಾಸವನ್ನು ಅಳೆಯಲು ಯುಕ್ತ ಪ್ರಯೋಗವನ್ನು ರೂಪಿಸಿದರು.  ಪ್ರಯೋಗಲಭ್ಯ ಫಲಿತಾಂಶ ಅನಿರೀಕ್ಷಿತವಾಗಿತ್ತು: ವೇಗವ್ಯತ್ಯಾಸವಿರಲಿಲ್ಲ.

	ಈ ವ್ಯಾಘಾತ (ಕಾಂಟ್ರಡಿಕ್ಷನ್) ಗಮನಿಸಿದ ಫಿಟ್ಸ್‍ಜೆರಲ್ಡ್, 1892ರಲ್ಲಿ ಇದಕ್ಕೊಂದು ಪರಿಹಾರ ಸೂಚಿಸಿದ.  ಇದರ ಪ್ರಕಾರ ಒಂದು ವಸ್ತು ಸಮವೇಗದಲ್ಲಿ ಚಲಿಸುತ್ತಿದ್ದರೆ, ಚಲನೆಯ ದಿಶೆಯಲ್ಲಿ ಅದರ ಉದ್ದ ಮೊದಲಿಗಿಂತ (ಅಂದರೆ ಚಲನೆಯಲ್ಲಿದ್ದಾಗ ಆದಕ್ಕಿದ್ದ ಉದ್ದಕ್ಕಿಂತ) ಕಡಿಮೆಯಿರುತ್ತದೆ.  ಇದರಿಂದ ಪ್ರಯೋಗದಲ್ಲಿ ಉಪಯೋಗಿಸಿದ ಉಪಕರಣಗಳು ಕೂಡ ಸಂಕೋಚಿಸುತ್ತವೆ.  ಇದೇ ಅಭಿಪ್ರಾಯವನ್ನು ಲ್ರೆರೆಂಟ್ಝ್ 1895ರಲ್ಲಿ ಮಂಡಿಸಿ ಇದನ್ನು ಇನ್ನೂ ಹೆಚ್ಚು ಮುಂದುವರಿಸಿದ.  ಹೀಗಾಗಿ ಇದಕ್ಕೆ ಲ್ರೆರೆಂಟ್‍ಝ-ಫಿಟ್ಸ್‍ಜೆರಲ್ಡ್ ಸಂಕೋಚನ ಎಂಬ ಹೆಸರು ಬಂದಿದೆ.
(ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ